Wednesday, September 10, 2008

ಪ್ರಸ್ತಾವನೆ

ಈ ಸರಣಿ ಲೇಖನದ ಹಿನ್ನೆಲೆಯನ್ನ ಸ್ವಲ್ಪ ಹೇಳ್ತೇನೆ. ನಾವೆಲ್ಲ ವಿಜ್ಞಾನದ ವಿದ್ಯಾರ್ಥಿಗಳು, ಎಲ್ಲರೂ ಕಾಲೇಜಿನಲ್ಲಿ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡಿರದಿದ್ದರೂ ಸಹ ಕನಿಷ್ಟ ಹತ್ತನೇ ತರಗತಿಯವರೆವಿಗಾದರೂ ನಾವು ವಿಜ್ಞಾನದ ಓನಾಮವನ್ನು ಕಲಿಯುತ್ತಾ ಬಂದಿದ್ದೇವೆ. ಬದುಕಿನ ಪುಟ್ಟ-ಪುಟ್ಟ, ದೊಡ್ಡ-ದೊಡ್ಡ ಅಚ್ಚರಿಗಳನ್ನೆಲ್ಲ ಬೆರಗುಗಣ್ಣಿನಿ೦ದ ನೋಡುವ ಯಾರೇ ಆಗಲಿ ವಿಜ್ಞಾನವನ್ನು ಪ್ರೀತಿಸಬಲ್ಲರು. ವಿಜ್ಞಾನ ಅ೦ದ್ರೆ ಮತ್ತೇನಿಲ್ಲ, ಅಸ್ತಿತ್ವದ ಎಲ್ಲ ಗುಟ್ಟುಗಳನ್ನು ಬಿಡಿಸಬೇಕೆ೦ಬ ನಮ್ಮದೇ ವಾಂಛೆಯ ಮೂರ್ತರೂಪ. ಎಲ್ಲವನ್ನೂ ತಿಳಿದುಕೊಳ್ಳುವೆವೆಂದು ಹೊರಡುವಾಗ ನಮಗೆ ಕೆಲವೊಂದು ಪ್ರಾರಂಭ ಬಿಂದುಗಳು ಬೇಕು, ಕೆಲವೊಂದು ಊಹನೆಗಳು(assumptions), ಹಲಕೆಲವು ಪ್ರತಿಪಾದನೆಗಳು (postulates).. ಹೀಗೆ. ಆ ಪ್ರಾರಂಭ ಬಿಂದುಗಳನ್ನು ಸರಿಯಾಗಿ ಅರ್ಥೈಸಿ ಹಿಡಿದುಕೊಳ್ಳುವೆವಾದರೆ ವಿಜ್ಞಾನದಲ್ಲಿ ನಮಗೆ ಆಸಕ್ತಿಯೂ ಉಳಿದೀತು ಜೊತೆಗೆ ಮುಂದುವರೆದ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೂ ಸುಲಭ. ವಿಜ್ಞಾನದಲ್ಲಿಯ ಎಲ್ಲ ವಿಚಾರಗಳು, ಸಿದ್ಧಾಂತಗಳು ಈ ಪ್ರಾರಂಭ ಬಿಂದುಗಳಿಂದ ಶುರುವಾಗಿ ಹಲಕೆಲವು ತರ್ಕಸರಣಿಗಳ ಜಾಡು ಹಿಡಿದು ಒಂದು ಫಲಿತದಲ್ಲಿ (result) ಅಂತ್ಯವಾಗುತ್ತವೆ.  ಈ ನಿಟ್ಟಿನಲ್ಲಿ ವಿಜ್ಞಾನದ ಕಲಿಕೆಯಲ್ಲಿ, ಬಾಲ್ಯದಲ್ಲೇ ಭದ್ರವಾದ ಅಡಿಪಾಯ ಹಾಕದಿದ್ದರೆ ಮುಂದಿನ ಕಲಿಕೆ ನೈಜ ಕಲಿಕೆಯಾಗಿರುವುದಿಲ್ಲ, ಕೇವಲ ಗಿಳಿಪಾಠದಂತಿರುತ್ತದೆ. ಅದರಿಂದ ಯಾವ ಮಹತ್ತರ ಉಪಯೋಗವೂ ಇಲ್ಲ. ಈಗಲೂ ಕಾಲ ಮಿಂಚಿಲ್ಲ, ಕಲಿಕೆಗೆ ವಯಸ್ಸೇನು ಮಿತಿಯೇ? ವಿಜ್ಞಾನದ ಮೂಲಭೂತ ವಿಚಾರಗಳನ್ನು ಅರ್ಥಮಾಡಿಕೊಳ್ಳುವ, ಅರ್ಥಮಾಡಿಕೊಂಡದ್ದನ್ನು ಹಂಚಿಕೊಳ್ಳುವ ಪ್ರಯತ್ನ ಮಾಡೋಣ.

ಈ ಅಸ್ತಿತ್ತ್ವವನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದವರಿಗೆ ಕಂಡುಬರುವ ಮೂಲಭೂತ ಘಟಕಗಳು ಕೆಲವು. ಇಡೀ ವಿಶ್ವ ಆಗಿರುವುದು ಇವುಗಳಿಂದಲೇ
1. ಆಕಾಶ/ಅವಕಾಶ (space), ಅಂದರೆ - ತ್ರಯಾಮ ಸ್ಥಳ (3D space)/ ಜಾಗ. ಆಕಾಶ ಎಂದರೆ ತಲೆ ಎತ್ತಿ ನೋಡಿದಾಗ ಕಾಣುವ ನೀಲಧಿಯಷ್ಟೇ ಅಲ್ಲ
2. ಕಾಲ (Time), ಯಾವುದೇ ಎರಡು ಭಿನ್ನ ಸ್ಥಿತಿಗಳ/ ಕ್ರಿಯೆಗಳ ನಡುವಿನ ಅಂತರ ಸಮಯದಿಂದುಂಟಾದುದು. ಸತತವಾಗಿ ಸಮಯ ಆಗುತ್ತಲೇ ಇರುತ್ತದೆ. ಇಲ್ಲಿ ಸಮಯ ಎಂದರೆ ನಿರಪೇಕ್ಷ ಅರ್ಥದಲ್ಲಿ ತೆಗೆದುಕೊಳ್ಳಬೇಕು. ನಾವು ಕಾಣುವ ಹಗಲು, ರಾತ್ರಿ, ಋತುಗಳು, ಕೇವಲ ಇವಷ್ಟೇ ಸಮಯ ಅಲ್ಲ.
3. ವಸ್ತು (Mass/matter), ನಾವು ಕಣ್ಣಿನಿಂದ ಕಾಣುವ, ಸ್ಪರ್ಶಿಸುವ ಅಸ್ತಿತ್ವವೆಲ್ಲ ನಿರ್ಮಿತವಾಗಿರುವುದು ವಸ್ತುವಿನಿಂದ; ಅದು ಘನ/ದ್ರವ/ಅನಿಲ ಯಾವುದೇ ಆಗಿರಲಿ ಎಲ್ಲವೂ ವಸ್ತುವೇ
4. ಶಕ್ತಿ (Energy), ನಾವು ಕಾಣುತ್ತಿರುವ ವಸ್ತುನಿರ್ಮಿತವಾದ ಜಗತ್ತೇನಿದೆ ಅದರ ಎಲ್ಲ ಚಟುವಟಿಕೆಗಳಿಗೆ ಶಕ್ತಿ ಅವಶ್ಯವಾಗಿ ಬೇಕು.
ಜೊತೆಗೆ ಮೇಲಿನವುಗಳೆಲ್ಲದರ interactionಗಳನ್ನು ನಿಯಮಿಸುವ "ವೈಶ್ವಿಕ ನಿಯಮಗಳು (universal laws)". ಅಂದರೆ, ಮೇಲಿನ ನಾಲ್ಕು ಮೂಲಭೂತ ಘಟಕಗಳ ಗುಣಲಕ್ಷಣಗಳೇನು, ಅವು ಪರಸ್ಪರ ಹೇಗೆ ಸಂಬಂಧಿಸುತ್ತವೆ, ಇತ್ಯಾದಿ... ಈ ವೈಶ್ವಿಕ ನಿಯಮಗಳ ಕುರಿತಾದ ಅರಿವು ಮೂಡಿಸುವಂತದ್ದೇ ವಿಜ್ಞಾನ. ಈ ಎಲ್ಲ ಮೂಲಭೂತ ಸಂಗತಿಗಳನ್ನು ಒಂದೊಂದಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

-- 
ರಮೇಶ ಬಿ. ವಿ.
ಶಶಾ೦ಕ ಜಿ. ಪಿ.

3 comments:

  1. ಶಶಾಂಕ, ರಮೇಶ್, ಬಹಳ ಒಳ್ಳೆಯ ಪ್ರಯತ್ನ. ಮಕ್ಕಳಿಗೆ (ದೊಡ್ಡವರಿಗೂ)ವಿವರಿಸಲಂತೂ ಬಹಳ ಅನುಕೂಲಕರವಾದ ಭಾಷೆಯಲ್ಲಿ ಬರೆದಿದ್ದೀರಿ.
    ಅಂದಹಾಗೆ, ನಾವು ಮಕ್ಕಳಿಗಾಗಿ ಶಿಬಿರಗಳನ್ನ ಮಾಡ್ತಿರ್ತೇವೆ. ವಿಶೇಷವಾಗಿ ಹಳ್ಳಿಗಳ ಸರ್ಕಾರಿ ಶಾಲೆಯ ಮಕ್ಕಳಿಗೆ. ಆಗ ನಾವಿದನ್ನ ಬಳಸಿಕೊಳ್ಳಬಹುದಾ ಹೇಗೆ?

    - ಚೇತನಾ

    ReplyDelete
  2. ಖಂಡಿತವಾಗಿ. ನಾವು ಮತ್ತೊಬ್ಬರಿಂದ ಕಲಿತದ್ದನ್ನು ತಾನೆ ಹಂಚಿಕೊಳ್ಳುತ್ತಿರುವುದು. ನಿರ್ಭಿಡೆಯಿಂದಲೇ ಬಳಸಿ. ಹಂಚಿಕೊಳ್ಳುವಿಕೆ ವಿಸ್ತಾರವಾದಷ್ಟೂ ಒಳ್ಳೆಯದೇ.

    ಈ ಲೇಖನಗಳು ಯಥಾರ್ಥದ ನಿರೂಪಣೆಯನ್ನು ಉದ್ದೇಶವಾಗಿ ಹೊಂದಿರುವುದರಿಂದ, ಲೇಖನಗಳು ಬದಲಾವಣೆಗಳಿಗೆ ಪಕ್ಕಾಗಬಹುದು. ಸಲಹೆ, ಸೂಚನೆಗಳಿಗೆ, ಟೀಕೆ ಟಿಪ್ಪಣಿಗಳಿಗೆ ಸ್ವಾಗತ. ಚರ್ಚೆಯು ಎಲ್ಲ ಆಯಾಮಗಳಿಗೆ ತೆರೆದಿದೆ.

    ReplyDelete
  3. GOOD ATTEMPT KEEP WRITINGS IF POSSIBLE WITH DIAGRAMS OR ANIMATIONS MAY BE DONE.

    ReplyDelete